ಪ್ರೇಡ್, ವಿನ್‍ತ್ರಾಪ್ ಮ್ಯಾಕ್‍ವರ್ತ್
	1802-1839. ಆಂಗ್ಲಕವಿ. ಹುಟ್ಟಿದ್ದು ಲಂಡನ್ನಿನಲ್ಲಿ. ತಂದೆ ವಿಲಿಯಂ ಮ್ಯಾಕ್‍ವರ್ತ್ ಪ್ರೇಡ್, ವಕೀಲ ತಾಯಿ ನ್ಯೂ ಇಂಗ್ಲೆಂಡಿನ ವಿನತ್ರಾಪ್ ಕುಟುಂಬಕ್ಕೆ ಸೇರಿದವಳು. ಶಿಕ್ಷಣ ಈಟನ್‍ನಲ್ಲಿ ಹಾಗೂ ಕೇಂಬ್ರಿಜ್‍ನ ಟ್ರಿನಿಟಿ ಕಾಲೇಜಿನಲ್ಲಿ ನಡೆಯಿತು. ಈಟನ್‍ನಲ್ಲಿ ಓದುತ್ತಿದ್ದಾಗಲೇ ಕೈಬರಹದ ಶಾಲಾಪತ್ರಿಕೆಯ ಸಂಪಾದಕನಾಗಿದ್ದ. ಕೇಂಬ್ರಿಜ್‍ನಲ್ಲಿದ್ದಾಗ ಕಾವ್ಯಕ್ಕಾಗಿ ಮೀಸಲಾಗಿದ್ದ ಛಾನ್ಸೆಲರ್ ಪದಕವನ್ನು ಎರಡು ಬಾರಿ ಗಳಿಸಿದ. 1827ರಲ್ಲಿ ಈತ ಟ್ರಿನಿಟಿ ಫೆಲೋಶಿಫ್‍ಗೆ ಆಯ್ಕೆಯಾಗಿದ್ದನೆಂಬುದು ವಿದ್ಯಾರ್ಥಿಯಾಗಿ ಈತನೆಷ್ಟು ಪ್ರತಿಭಾವಂತನಾಗಿದ್ದನೆಂಬುದನ್ನು ತೋರಿಸುತ್ತದೆ. 1829ರಲ್ಲಿ ವಕೀಲವೃತ್ತಿಯನ್ನು ಆರಂಭಿಸಿದನಾದರು ಬಹುಬೇಗ ಈತನ ಒಲವು ರಾಜಕೀಯದತ್ತ ಹರಿಯಿತು. 1830-32ರ ಅವಧಿಯಲ್ಲಿ ಈತ ವ್ಹಿಗ್ ಪಕ್ಷದ ಪ್ರತಿನಿಧಿಯಾಗಿ ಪಾರ್ಲಿಮೆಂಟಿಗೆ ಆಯ್ಕೆಗೊಂಡ. ಆದರೆ ಸುಧಾರಣಾವಾದಿಗಳ ಕೈಮೇಲಾದಾಗ ಈತ ತನ್ನ ಸ್ಥಾನವನ್ನು ಕಳೆದುಕೊಳ್ಳಬೇಕಾಗಿ ಬಂತು. ಆದರೂ ಮುಂದೆ 1834ರಿಂದ ತಾನು ತೀರಿಕೊಳ್ಳುವವರೆಗೆ ವಿವಿಧ ಕ್ಷೇತ್ರಗಳಿಂದ ಆಯ್ಕೆಗೊಂಡ ಜನರ ಪ್ರತಿನಿಧಿಯಾಗಿ ಕೆಲಸಮಾಡಿದ. ಫೀಲ್‍ನ ಆಡಳಿತದಲ್ಲಿ 1835ರಲ್ಲಿ ನಿಯಂತ್ರಣ ಮಂಡಳಿಯ ಕಾರ್ಯದರ್ಶಿಯೂ ಆಗಿದ್ದ. ಕ್ಷಯರೋಗಕ್ಕೆ ತುತ್ತಾಗಿ ಜುಲೈ 15, 1839 ರಂದು ಕೊನೆಯುಸಿರನ್ನೆಳೆದ.

	ಈತ ತನ್ನ ಕಾಲದ ಪ್ರಸಿದ್ಧ ಭಾಷಣಕಾರನಾದರೂ ಈತನ ಖ್ಯಾತಿ ನಿಂತಿರುವುದು ಈತನ ಸಾಹಿತ್ಯಕ ಸಾಧನೆಯ ಆಧಾರದ ಮೇಲೆಯೇ. ಈತ ಸಾಕಷ್ಟು ಪ್ರಮಾಣದಲ್ಲಿ ಗಂಭೀರ ಕಾವ್ಯ ರಚಿಸಿದನಾದರೂ ಲೋಕದಲ್ಲಿ ಕಾಣುವ ಸ್ತ್ರೀ ಪುರುಷರ ಸ್ವಭಾವ, ವೈಚಿತ್ರ್ಯ ಹಾಗೂ ವೈಲಕ್ಪಣ್ಯಗಳನ್ನು ಹಾಸ್ಯಮಯವಾಗಿ ಚಿತ್ರಿಸುವ ಈತನ ಹನಿಗವಿತೆಗಳು ಲಘುಕವಿತೆಗಳ ಕ್ಷೇತ್ರದಲ್ಲಿ ಈತನನ್ನು ಉತ್ತುಂಗ ಶಿಖರಕ್ಕೆ ಕೊಂಡೊಯ್ದಿವೆ. ಆ ದಿನಗಳಲ್ಲಿ ಮಾನವ ಸ್ವಭಾವದ ಲೋಪದೋಷಗಳನ್ನು ಈತನಷ್ಟು ಜೀವಂತವಾಗಿ ಹಾಗೂ ಹಾಸ್ಯ ಲೇಪದೊಡನೆ ಚಿತ್ರಿಸಿದವರು ವಿರಳ. ಗುಡ್‍ನೈಟ್ ಟು ದಿ ಸೀಸನ್ ಹಾಗೂ ಅವರ್ ಬಾಲ್ ಇದಕ್ಕೆ ಒಳ್ಳೆಯ ನಿದರ್ಶನಗಳು. ಛಂದೋವೈವಿಧ್ಯದೊಂದಿಗೆ ಸಾಮಾನ್ಯ ಜನಜೀವನದ ದೃಶ್ಯಗಳನ್ನು ಚಿತ್ರಿಸುವ ಶೈಲಿಗೆ ಉದಾಹರಣೆ ಈತನ ವಿಕಾರ್‍ನಂಥ ರಚನೆ. ಈತನ ಲೇವಡಿ ಬರಹಗಳು ಟ್ರ್ಯಾಶ್ ಡೇಡಿಕೇಟೆಡ್ ವಿತೌಟ್ ರೆಸ್ಟೆಕ್ಟ್ ಟು ಜೇಮ್ಸ್ ಹಾಲ್ಸೆ ಎಸ್ಕ್ವೈರ್ ಎಂ.ಪಿ. ಎಂಬ ಹೆಸರಿನಲ್ಲಿ ಪ್ರಕಟವಾಗಿವೆ. ಇವನ ಗಟ್ಟಿ ರಚನೆಗಳೆಂದು ಭಾವಿಸಲಾಗಿರುವ ರೆಡ್ ಫಿಶರ್‍ಮನ್ ಮತ್ತು ಸರ್ ನಿಕೊಲಾಸ್‍ನಂಥ ರಚನೆಗಳನ್ನು ಥಾಮಸ್ ಬಾರ್ಬಿಗ್‍ಟನ್ ಮೆಕಾಲೆ ಮತ್ತು ಥಾಮಸ್ ಹುಡ್ ಅವರ ರಚನೆಗಳಿಗೆ ಹೆಗಲೆಣಿಯಾದುವೆಂದು ಹೇಳಲಾಗಿದೆ. ಈತನ ಸಮಸ್ತ ಕವಿತೆಗಳ ಸಂಗ್ರಹ 1864ರಲ್ಲೂ ಗದ್ಯಪ್ರಬಂಧಗಳು 1887ರಲ್ಲೂ ರಾಜಕೀಯ ಕವಿತೆಗಳ ಸಂಕಲನ 1888ರಲ್ಲೂ ಪ್ರಕಟವಾದುವು.											    (ಪಿ.ಜಿ.ಡಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ